Friday, December 26, 2014

ಶ್ರೀ ಆಂಜನೇಯ ಪೂಜಾ-೨೦೧೪


For Program Photos click here (Courtesy Sri Guru Acharya)

ಓಂಕಾರ ಸಮಿತಿಯು ಸಮಾಜದ ಭಾಂದವರ ಉನ್ನತಿಗಾಗಿ ಪ್ರತಿ ವರ್ಷವು ಪ್ರಾಣದೇವರಾದ ಶ್ರೀ ಆಂಜನೇಯ ಸ್ವಾಮಿಯ ಪೂಜೆಯನ್ನು ನಡೆಸಿಕೊಂಡು ಬರುತ್ತಿದೆ. ಈ ವರ್ಷವು ಭಗವಂತನ ಪ್ರೇರಣೆ ಎಂಬಂತೆ ಶ್ರೀ ಆಂಜನೇಯ ಸ್ವಾಮಿಯ ಪೂಜೆಯನ್ನು ದಾರಸೇಟ್ ನ ಶ್ರೀಕೃಷ್ಣಮಂದಿರ ಸಭಾಂಗಣದಲ್ಲಿ ದಿನಾಂಕ ೨೬-ಡಿಸೆಂಬರ್-೨೦೧೪ ರಂದು ಸಹಸ್ರಾರು ಜನರ ಸಮ್ಮುಖದಲ್ಲಿ ಭಕ್ತಿಪೂರ್ವಕವಾಗಿ ಊರಿನಲ್ಲಿ ನಡೆಯುವ ಜಾತ್ರೆಯೇನೋ ಎಂಬಂತೆ ವಿಜೃಂಭಣೆಯಿಂದ ಆಚರಿಸಲ್ಪಟ್ಟಿತು.

ದಿನಾಂಕ ೨೫-ಡಿಸೆಂಬರ್-೨೦೧೪ ಪೂಜೆಯ ಹಿಂದಿನ ದಿನ ಸಂಜೆಯಿಂದಲೇ ಎಲ್ಲ ಕಾರ್ಯಕರ್ತರ ಚಟುವಟಿಕೆಗಳು ಆರಂಭಗೊಂಡವು. ಈ ಬಾರಿ ಮಹಾಪ್ರಸಾದದ ಪಂಚಭಕ್ಷ-ನೈವೇದ್ಯದ ಅಡುಗೆಯನ್ನು ಇಲ್ಲಿಯೇ ತಯಾರಿಸಬೇಕೆಂಬ ನಿಶ್ಚಯವಾಗಿದ್ದರಿಂದ ಎಲ್ಲರ ಸಮ್ಮುಖದಲ್ಲಿ ಅಡುಗೆಮನೆಯ ಪೂಜೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಎಲ್ಲ ಕಾರ್ಯಕರ್ತರು ವೇದಿಕೆ ಮತ್ತು ಸಭಾಂಗಣದ ತಯಾರಿಯಲ್ಲಿದ್ದರೆ, ಅಡುಗೆಭಟರ ತಂಡ ಪಾಕಶಾಲೆಯ ವ್ಯವಸ್ಥೆಯನ್ನು ಮಾಡಿಕೊಳ್ಳುತ್ತಿರುವ ದೃಶ್ಯ ಕಂಡು ಬರುತ್ತಿತ್ತು. ಮಹಿಳಾ ಕಾರ್ಯಕರ್ತರು ಅಡುಗೆಗೆ ಬೇಕಾಗುವ ಎಲ್ಲ ಕಾಯಿಪಲ್ಯಗಳನ್ನು ಹೆಚ್ಚಿ ಕೊಟ್ಟು ತಮ್ಮನ್ನು ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಅಂತೂ ದಿನದ ಕೊನೆಗೆ ಎಲ್ಲ ಕಾರ್ಯಕರ್ತರ ಭಕ್ತಿಭಾವಗಳ ಪರಿಶ್ರಮದಿಂದ ಅದ್ಧೂರಿಯಾಗಿ ಅಲಂಕೃತವಾದ ವೇದಿಕೆ ಮತ್ತು ಸಭಾಂಗಣ ನಿರ್ಮಾಣಗೊಂಡಿತ್ತು. 

ದಿನಾಂಕ ೨೬-ಡಿಸೆಂಬರ್-೨೦೧೪ ಬೆಳಿಗ್ಗೆ ೮:೪೫ಕ್ಕೆ ದೇವಸ್ಥಾನದ ಆವರಣದಲ್ಲಿರುವ ಶ್ರೀ ಗಣೇಶ ದೇವಸ್ಥಾನ, ಶ್ರೀ ದೇವಿಯ ದೇವಸ್ಥಾನ ಮತ್ತು ಶ್ರೀಕೃಷ್ಣದೇವರಿಗೆ ಪೂಜೆ ಸಲ್ಲಿಸಿ ಸಭಾಂಗಣದಲ್ಲಿ ಪ್ರಾರ್ಥನೆಯೊಂದಿಗೆ ಪೂಜಾ ವಿಧಿವಿಧಾನಗಳು ವೇದಮೂರ್ತಿ ಶ್ರೀ ಲಕ್ಷ್ಮೀನಾರಾಯಣ ಆಚಾರ್ಯ ಕಳ್ಮಂಜೆಯವರ ನೇತೃತ್ವದಲ್ಲಿ ಆರಂಭಗೊಂಡವು. ಶ್ರೀಮತಿ ಮತ್ತು ಶ್ರೀ ದ್ವಾರಕೀನಾಥ ಅವರಿಂದ ಸಂಕಲ್ಪ ನೆರವೇರಿಸಲ್ಪಟ್ಟಿತು ಮತ್ತು ಇದೇ ವೇಳೆ ಭಜನಾ ತಂಡದವರಿಂದ ಭಜನೆಗಳ ಸುನಾದ ಹೊಮ್ಮಿ ಬರಲಾರಂಬಿಸಿದವು.

ನಂತರ ಆಂಜನೇಯ ಸ್ವಾಮಿಗೆ ಪಂಚಾಮೃತ ಅಭಿಷೇಕ, ಕ್ಷೀರಾಭಿಷೇಕ, ಎಳೆನೀರಿನ ಅಭಿಷೇಕ, ಉಷ್ಣೋದಕ ಅಭಿಷೇಕ ಮತ್ತು ಶ್ರೀಗಂಧದ ಅಭಿಷೇಕ, ವಿಜೃಂಭಣೆಯಿಂದ ನೆರವೇರಿತು. ನಂತರ  ಆಂಜನೇಯ ಸ್ವಾಮಿಗೆ ಭಕ್ತರಿಂದ ಕೊಡಲ್ಪಟ್ಟ ಆಭರಣ ಸಮರ್ಪಣೆಯನ್ನು ಚಂಡೆಮೇಳದೊಂದಿಗೆ ನೆರವೇರಿಸಲ್ಪಟ್ಟಿತು. ವಿರಾಟ ಶ್ರೀ ಆಂಜನೇಯ ಸ್ವಾಮಿಯ ಅಲಂಕಾರವನ್ನು ಭಕ್ತಸಮೂಹದ ಕಣ್ಣು ತುಂಬಿಕೊಂಡಿತ್ತು ಎಂದರೆ ತಪ್ಪಗಲಾರದು. ಆಂಜನೇಯ ಸ್ವಾಮಿಗೆ ಬಹು ಇಷ್ಟಪ್ರದವಾದ ವಡಮಾಲೆ ಸಮರ್ಪಣೆಯನ್ನು ಮಾಡಲಾಯಿತು.

ಬೆಳಿಗ್ಗೆ ೯:೦೦ಘಂಟೆಯಿಂದ ಮಧ್ಯಾಹ್ನ ೧೨:೩೦ರ ವರೆಗೆ ಶ್ರೀ ವಿಶ್ವಕರ್ಮ ಒಕ್ಕೂಟ ಮಸ್ಕತ್, ಡಿವೈನ್ ಪಾರ್ಕ್ ಮಸ್ಕತ್, ಸಾಯಿಸೇವಾ ಸಮಿತಿ ಮಸ್ಕತ್, ಜಿ ಎಸ್ ಬಿ ಸಮಾಜ ಮಸ್ಕತ್, ಶ್ರೀಗಣೇಶ ವೃಂದ ಮಸ್ಕತ್ ಇವರಿಂದ ಭಕ್ತಿಭಜನೆಗಳ ಸಂಗೀತ ಸುಗಮವಾಗಿ ಹರಿದು ಬಂದವು.

ಅಲಂಕಾರ ಪೂಜೆಯ ನಂತರ ಪ್ರಾಣದೇವರಿಗೆ ಇಷ್ಟವಾದ ಶ್ರೀ ಹನುಮಾನ್ ಚಾಳೀಸಾ ಮತ್ತು ಹರಿವಾಯುಸ್ತುತಿ ಪಾರಾಯಣ ಮಾಡಲಾಯಿತು. ತದನಂತರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಮಹಾನೈವೇದ್ಯವನ್ನು ಭಜನೆಯೊಂದಿಗೆ ಮತ್ತು ಮಹಾಮಂಗಳಾರತಿಯನ್ನು ಪಂಚವಾದ್ಯದೊಂದಿಗೆ ನಡೆದಾಗ ಎಲ್ಲ ಭಕ್ತ ಸಮೂಹ ಭಕ್ತಿ ಪರವಶದಿಂದ ಪ್ರಾಣದೇವರ ಕೃಪೆಗೆ ಪಾತ್ರರಾದರು.

ಎಲ್ಲ ಭಕ್ತಸಮೂಹಕ್ಕೆ ತೀರ್ಥ, ಪ್ರಸಾದ ಮತ್ತು ಅಭಿಷೇಕದೊಂದಿಗೆ ಮಹಾಪ್ರಸಾದವನ್ನು ಅಚ್ಚುಕಟ್ಟಾಗಿ ವಿತರಿಸಲಾಯಿತು.

ಪೂಜೆಗೆ ಸಹಕರಿಸಿದ ಎಲ್ಲ ಕಾರ್ಯಕರ್ತರು, ಮಹಿಳಾ ಕಾರ್ಯಕರ್ತರು, ದಾನಿಗಳು, ಹಿಂದುಮಹಾಜನ ಕೂಟ, ಅಡುಗೆ ತಂಡ, ಭಜನಾ ತಂಡಗಳು, ಪಂಚವಾದ್ಯ ತಂಡ, ಮತ್ತು ಸಹಾಯಕ ತಂಡಕ್ಕೆ ಓಂಕಾರ ಸಮಿತಿಯ ಪರವಾಗಿ ಎಲ್ಲರಿಗೂ ಧನ್ಯವಾದಗಳು.   
|| ಸರ್ವೇ ಜನಾಃ ಸುಖಿನೋ ಭವಂತು ||


|| ಸನ್ಮಂಗಳಾನಿ ಭವಂತು ||